ನಾಗದಾಳಿ ಗಿಡದಲ್ಲಿ ಮಕ್ಕಳಿಗೂ ಹಾಗೂ ದೊಡ್ಡವರಿಗು ಉಪಯುಕ್ತವಾದ ಔಷಧಿಯ ಗುಣಗಳಿದೆ. ಕೊಡಗಿನ ಎಲ್ಲಾ ಮನೆ ಅಂಗಳದಲ್ಲಿ ರಾರಾಜಿಸುವ ಈ ಗಿಡದ ಔಷಧಿಯ ಗುಣಗಳನ್ನು ತಿಳಿದುಕೊಳ್ಳೋಣ.
ಕಫ ಪ್ರವರ್ತಿಯವರಿಗೆ...... ನಾಗದಾಳಿ ಗಿಡದ ಸೊಪ್ಪನ್ನು ಒಣಗಿಸಿ ನಿತ್ಯವೂ ಈ ಸೊಪ್ಪಿನ ಪುಡಿಯನ್ನು ಕೆಂಡದ ಮೇಲೆ ಹಾಕಿ ಇದರ ದೂಪ ತೆಗೆದುಕೊಳ್ಳಬೇಕು. ಒಂದು ಚಮಚ ಜೇನು ಅರ್ಧ ಚಮಚ ನಾಗದಾಳಿರಸ ಮಿಶ್ರಣವನ್ನು ನಿತ್ಯವೂ ಸೇವಿಸುವುದರಿಂದ ಕಫ ಕಡಿಮೆಯಾಗುತ್ತದೆ.( ಸಣ್ಣ ಮಕ್ಕಳಿಗೆ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಬೇಕು. )
ಮೈಕೈ ನೋವು ಇದ್ದರೆ ಅರ್ಧಲೋಟ ಎಳ್ಳೆಣ್ಣೆ ಜೊತೆಗೆ ನಾಗದಾಳಿ ಸೊಪ್ಪು ಒಂದು ಮುಷ್ಟಿ ಒಂದು ಬೆಳ್ಳುಳ್ಳಿ ಹೊಂಗೆ ಮರದ ಎಲೆ ಐದರಿಂದ ಆರು ಒಂದು ಲವಂಗ ಹಾಕಿ ಚೆನ್ನಾಗಿ ಕುದಿಸಿ ತಣ್ಣಗಾದ ಮೇಲೆ ಶೋಧಿಸಿ ಬಾಟಲಿಯಲ್ಲಿ ತುಂಬಿಟ್ಟುಕೊಂಡು ಮೈಕೈ ನೋವು ಇರುವ ಜಾಗಕ್ಕೆ ಈ ತೈಲವನ್ನು ಹಚ್ಚಿ ಒಂದು ತಾಸಿನ ನಂತರ ಬಿಸಿನೀರು ಹಾಕಿ ನೋವಿನಿಂದ ಮುಕ್ತಿ ಪಡೆಯಬಹುದು.
ಎರಡು ಖರ್ಜೂರ 10 ಅಥವಾ 15 ನಾಗದಾಳಿ ಸೊಪ್ಪು ಚೆನ್ನಾಗಿ ಪೇಸ್ಟ್ ತಯಾರಿಸಿಕೊಂಡು ಒಂದು ಲೋಟ ಹಾಲಿಗೆ ಈ ಪೇಸ್ಟ್ ನ ಜೊತೆಗೆ ಕೆಂಪು ಕಲ್ಲು ಸಕ್ಕರೆ ಹಾಕಿ ಸೇವಿಸುವುದರಿಂದ ಕೃಶವಾದ ದೇಹ ಸ್ವಲ್ಪ ಮಟ್ಟಿಗೆ ಸುಧಾರಿಸಿಕೊಳ್ಳುತ್ತದೆ ಜೊತೆಗೆ ಕಫ,ಆಯಾಸ ಕಡಿಮೆಯಾಗುತ್ತದೆ.
ತುಂಬಾ ಮೈ ಕೈ ನೋವು , ಸಣ್ಣದಾಗೆ ಜ್ವರ ಬರುವಂತೆ ಬಾಸವಾದಾಗ ನಾಗದಾಳಿ ಸೊಪ್ಪಿನ ಜೊತೆಗೆ ಐದಾರು ಎಸಳು ಬೆಳ್ಳುಳ್ಳಿ ಸೇರಿಸಿ ಜಜ್ಜಿ ತಲೆಯಿಂದ ಕಾಲಿನವರೆಗೆ ಇದರ ರಸವನ್ನು ಹಚ್ಚಿ ಕಂಬಳಿ ಮುಚ್ಚಿ ಮಲಗಿದರೆ ಸ್ವಲ್ಪ ಮಟ್ಟಿಗೆ ರಿಲ್ಯಾಕ್ಸ್ ಆಗುತ್ತದೆ.
ನಾಗದಾಳಿ ಗಿಡ ಇದ್ದಲ್ಲಿ ಹಾವುಗಳು ಕೂಡ ಹತ್ತಿರ ಸುಳಿಯುವುದಿಲ್ಲ ಎಂದು ಹಿರಿಯವರು ಹೇಳಿದ ನೆನಪಿದೆ ಇನ್ನೇಕೆ ತಡ ಹಿತ್ತಲಲ್ಲಿ ಇರಲಿ ಒಂದು ನಾಗದಾಳಿ ಗಿಡ. ಹೆಚ್ಚು ಹೆಚ್ಚು ಮನೆಮದ್ದುಗಳನ್ನು ಉಪಯೋಗಿಸಿ ಆರೋಗ್ಯವಂತರಾಗೋಣ
ವನಿತಾ ಚಂದ್ರಮೋಹನ್ ಕೊಡಗು